ತಂಜಾವೂರು -
ತಮಿಳುನಾಡು ರಾಜ್ಯದ ಒಂದು ಪಟ್ಟಣ; ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ. ಕಾವೇರಿ ನದೀ ಮುಖಜ ಭೂಮಿಯ ಪಶ್ಚಿಮ ಭಾಗದಲ್ಲಿದೆ. ಮದರಾಸಿನಿಂದ ರೈಲಿನಲ್ಲಿ ಇಲ್ಲಿಗೆ 218 ಮೈ. (351 ಕಿ.ಮೀ.) ಜನಸಂಖ್ಯೆ 1,40,547 (1971). 10 ನೆಯ ಶತಮಾನದಿಂದ ತಂಜಾವೂರು ದಕ್ಷಿಣ ಭಾರತದ ಪ್ರಮುಖ ರಾಜಕೀಯ ಸಾಹಿತ್ಯಕ ಸಾಂಸ್ಕøತಿಕ ಧಾರ್ಮಿಕ ಕೇಂದ್ರಗಳಲ್ಲೊಂದಾಗಿ ಬೆಳೆದು ಬಂದಿದೆ. ತಂಜಾವೂರಿಗೆ ಪರಾಶರ ಕ್ಷೇತ್ರವೆಂಬ ಹೆಸರೂ ಉಂಟು. ಹಿಂದೆ ಇದು ತಂಜನ್ ಎಂಬ ರಾಕ್ಷಸನ ವಾಸಸ್ಥಾನವಾಗಿತ್ತೆಂದೂ ಅವನನ್ನು ಮಹಾವಿಷ್ಣು ಸಂಹರಿಸುವಾಗ ಆತ ಈ ನಗರ ತನ್ನ ಹೆಸರಿನಲ್ಲಿ ಪ್ರಸಿದ್ಧವಾಗಬೇಕೆಂದು ಕೇಳಿಕೊಂಡಿದ್ದರಿಂದ ನಗರಕ್ಕೆ ತಂಜಪುರವೆಂಬ ಹೆಸರು ಬಂತೆಂದೂ ಐತಿಹ್ಯವುಂಟು. ನಗರದಲ್ಲಿ 18ಕ್ಕೂ ಹೆಚ್ಚು ದೇವಾಲಯಗಳಿವೆ. ಇವುಗಳಲ್ಲಿ ಪ್ರಮುಖವಾದ್ದು 11 ನೆಯ ಶತಮಾನದಲ್ಲಿ ನಿರ್ಮಾಣವಾದ ಬೃಹದೀಶ್ವರ ದೇವಾಲಯ. ರಾಜರಾಜ ಚೋಳ ನಿರ್ಮಿಸಿದ್ದರಿಂದ ಈ ದೇವಾಲಯಕ್ಕೆ ರಾಜರಾಜ ದೇವಾಲಯವೆಂಬ ಹೆಸರೂ ಇದೆ. 

ಬೃಹದೀಶ್ವರ ದೇವಾಲಯದ ಉತ್ತರದಲ್ಲಿ ಹಳೆಯ ಅರಮನೆಯುಂಟು. ಇದರೊಳಗೆ ಕಲಾ ಗ್ಯಾಲರಿ, ಸರಸ್ವತಿ ಮಹಲ್ ಪುಸ್ತಕ ಭಂಡಾರ, ದರ್ಬಾರ್ ಹಾಲ್, ಆಯುಧಶಾಲೆ, ಪ್ರತೀಕ್ಷಾ ಗೋಪುರ ಹಾಗೂ ಸಂಗೀತಮಹಲುಗಳಿವೆ. ನಾಯಕ ಹಾಗೂ ಮರಾಠಾ ಪ್ರಭುಗಳ ಆಸಕ್ತಿಯಿಂದಾಗಿ ಬೆಳೆದ ಪುಸ್ತಕ ಭಂಡಾರದಲ್ಲಿ 30,000ಕ್ಕೂ ಹೆಚ್ಚು ಸಂಪುಟಗಳಿವೆ. ಇವುಗಳಲ್ಲಿ 8,000 ದಷ್ಟು ಕೃತಿಗಳು ಅಪೂರ್ವವಾದ ತಾಳೆಯೋಲೆಯ ಹಸ್ತಪ್ರತಿಗಳು, ಖಗೋಳಶಾಸ್ತ್ರ, ವೈದ್ಯ, ಜ್ಯೋತಿಷ ಮೊದಲಾದ ಹಲವು ವಿಷಯಗಳಿಗೆ ಸಂಬಂಧಿಸಿದ ತಮಿಳು, ತೆಲುಗು, ಮರಾಠಿ, ಸಂಸ್ಕøತ ಹಾಗೂ ಇತರ ಭಾಷೆಗಳ ಗ್ರಂಥಗಳು ಇಲ್ಲಿವೆ. ಶಿವಗಂಗಾ ಸರೋವರ, 1778ರಲ್ಲಿ ಸಿ. ಎಫ್. ಷ್ವಾಟ್ಸ್ ಎಂಬ ಪಾದ್ರಿ ನಿರ್ಮಿಸಿದ ಸ್ವಾಟ್ರ್ಸ್ ಚರ್ಚ್, ಜನತಾ ಉದ್ಯಾನ-ಇವು ತಂಜಾವೂರಿನ ಇತರ ಆಕರ್ಷಣೆಗಳು.

ತಂಜಾವೂರು ತಮಿಳು ನಾಡು ರಾಜ್ಯದ 8ನೆಯ ದೊಡ್ಡ ನಗರ. ಈ ನಗರದ ಸು. 85% ಜನ ಹಿಂದೂಗಳು. ಉಳಿದವರು ಕ್ರೈಸ್ತರು, ಮುಸಲ್ಮಾನರು ಹಾಗೂ ಜೈನರು. ಹಿಂದೆ ಕ್ರೈಸ್ತ ಮತ ಪ್ರಚಾರ ಕೇಂದ್ರವಾಗಿತ್ತು. 

ತಂಜಾವೂರು ಪ್ರವಾಸಿ ಕೇಂದ್ರ. ಇದು ದಕ್ಷಿಣ ಭಾರತದ ಒಂದು ಲಲಿತ ಕಲಾಕೇಂದ್ರ. ಭರತನಾಟ್ಯದ ತವರು. ಸುಮಾರು 1,000ಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿದ ಸುಪ್ರಸಿದ್ಧ ಕರ್ನಾಟಕ ಸಂಗೀತ ವಿದ್ವಾಂಸರಾದ ತ್ಯಾಗರಾಜರ (1767-1847) ಸಮಾಧಿ ತಂಜಾವೂರಿಗೆ 8 ಮೈ. ದೂರದ ತಿರುವೈಯಾರಿನಲ್ಲಿದೆ. ಇಲ್ಲಿ ಪ್ರತಿವರ್ಷವೂ ತ್ಯಾಗರಾಜರ ಆರಾಧನೆಯ ಸಮಯದಲ್ಲಿ ಕರ್ನಾಟಕ ಸಂಗೀತದ ಅನೇಕ ವಿದ್ವಾಂಸರು ನೆರೆದು ಆ ವಾಗ್ಗೇಯಕಾರರಿಗೆ ಸಂಗೀತಾಂಜಲಿಯನ್ನರ್ಪಿಸುತ್ತಾರೆ. ಪ್ರಸಿದ್ಧ ಪ್ರಾಚೀನ ಸಂಸ್ಕøತ ಶಿಕ್ಷಣ ಕಾಲೇಜೂ ಇದೆ. ಕುಶಲ ಕಲೆಗಳ ನಗರವೆನಿಸಿದ ತಂಜಾವೂರು ರೇಷ್ಮೆ ಬಟ್ಟೆಯ ತಯಾರಿಕೆಗೆ ಹೆಸರು ಪಡೆದಿದ್ದು. ಇಲ್ಲಿಯ ಸೀರೆಗಳು ತುಂಬ ಪ್ರಸಿದ್ಧವಾದವು. ಜಮಖಾನ, ರತ್ನಗಂಬಳಿ, ತಾಮ್ರದ ಪಾತ್ರೆಗಳು, ಆಭರಣ, ದೀಪ ಮತ್ತು ಸಂಗೀತ ವಾದ್ಯ ತಯಾರಿಕೆ, ಚಾಪೆ ಹೆಣಿಗೆ - ಇವು ಇತರ ಕೈಗಾರಿಕೆಗಳು. ತಂಜಾವೂರು ದಕ್ಷಿಣ ರೈಲ್ವೆಯ ಒಂದು ಪ್ರಮುಖ ನಿಲ್ದಾಣ. ಇದು ಭಾರತದ ಇತರ ದೊಡ್ಡ ನಗರಗಳೊಡನೆ ರೈಲ್ವೆ ಸಂಪರ್ಕ ಹೊಂದಿದೆ. ಸಮೀಪದ ವಿಮಾನನಿಲ್ದಾಣ ತಿರುಚಿರಪಳ್ಳಿಯಲ್ಲಿದೆ. ತಂಜಾವೂರನ್ನು ಸಂದರ್ಶಿಸಲು ಉತ್ತಮ ಕಾಲ ಜನವರಿ ತಿಂಗಳು.		(ಎಚ್.ಜಿ.ಎ.)

ಪ್ರಾಕ್ತನ : ತಂಜಾವೂರಿನ ಶಾಸನಗಳಿಂದ ಆ ಸ್ಥಳದ ವೈಭವದ ಅರಿವು ಸ್ವಲ್ಪಮಟ್ಟಿಗೆ ನಮಗೆ ಉಂಟಾಗುತ್ತದೆ. ಚೋಳ ಚಕ್ರಾಧಿಪತ್ಯದ ರಾಜಧಾನಿಯಾಗಿದ್ದುದರಿಂದ ವೈಭವೋಪೇತವಾದ ಅರಮನೆಗಳಿಂದಲೂ ಇತರ ವಸತಿ ಬಡಾವಣೆಗಳಿಂದಲೂ ಈ ಪಟ್ಟಣ ಕಂಗೊಳಿಸುತ್ತಿತ್ತು. ಪಟ್ಟಣದಲ್ಲಿ ವಿಸ್ತಾರವಾದ ರಾಜ ಬೀದಿಗಳಿದ್ದವು. ಪಟ್ಟಣಕ್ಕೆ ಸೇರಿದಂತೆ ಹೊರವಲಯದಲ್ಲಿ ಅಧಿಕಾರಿಗಳ ಮತ್ತು ನೌಕರರ ವಸತಿಗ್ರಹಗಳಿದ್ದು. ಸಾರ್ವಜನಿಕರ ಅನುಕೂಲಕ್ಕಾಗಿ ಆಸ್ಪತ್ರೆಗಳು, ಬಾವಿಗಳು, ಶಾಲೆಗಳು, ಇತ್ಯಾದಿ ಕಟ್ಟಡಗಳಿದ್ದವು ಮತ್ತು ಊರಿನ ಅನೇಕ ಭಾಗಗಳಲ್ಲಿ ದೇವಾಲಯಗಳನ್ನು ನಿರ್ಮಿಸಲಾಗಿತ್ತು.

ತಂಜಾವೂರಿನ ಪ್ರಾಮುಖ್ಯ ಇದುವರೆಗೂ ಉಳಿದು ಬಂದಿರುವುದಕ್ಕೆ ಮುಖ್ಯ ಕಾರಣ ಅಲ್ಲಿಯ ದೇವಾಲಯಗಳು. ವಾಸ್ತುಶಿಲ್ಪದ ಬೆಳೆವಣಿಗೆಗೆ ವಿಶೇಷ ಗಮನ ಮತ್ತು ಉತ್ತೇಜ ನೀಡಿದ ಚೋಳರು ತಂಜಾವೂರು ಹಾಗೂ ಅದರ ಸುತ್ತಮುತ್ತ ಅನೇಕ ದೇವಾಲಯಗಳನ್ನು ನಿರ್ಮಿಸಿದರು. ತಂಜಾವೂರಿನ ದೇವಾಲಯಗಳಲ್ಲೆಲ್ಲ ಮುಖ್ಯವಾದ್ದೆಂದರೆ 1010 ರಲ್ಲಿ ನಿರ್ಮಿತವಾದ ಬೃಹದೀಶ್ವರ ದೇವಾಲಯ ಮತ್ತು 18ನೆಯ ಶತಮಾನದಲ್ಲಿ ನಾಯಕರ ಕಾಲದಲ್ಲಿ ನಿರ್ಮಿತವಾದ ಸುಬ್ರಹ್ಮಣ್ಯ ದೇವಾಲಯ. ಚೋಳ ದೊರೆ 1ನೆಯ ರಾಜರಾಜ ನೇತೃತ್ವದಲ್ಲಿ ನಿರ್ಮಿತವಾದ ಬೃಹದೀಶ್ವರ ದೇವಾಲಯ ಚೋಳರ ರಾಜರಾಜ ಸಾರ್ವಭೌಮತ್ವವನ್ನು ಮತ್ತು ಅತನ ಉನ್ನತಾಕಾಂಕ್ಷೆಯನ್ನು ಪ್ರತಿಬಿಂಬಿಸುವಂತಿರುವ ಈ ದೇವಾಲಯವನ್ನು ಚಕ್ರವರ್ತಿ ಸುವರ್ಣಲೇಪಿತ ಕಲಶವನ್ನಿಟ್ಟು ಪ್ರತಿಷ್ಠಾಪಿಸಿದ.

  ಹೆಸರಿಗೆ ತಕ್ಕಂತೆ ಬೃಹದಾಕಾರವಾಗಿರುವ ಈ ದೇವಾಲಯವನ್ನು 750'(250' ವಿಸ್ತೀರ್ಣವುಳ್ಳ ಪ್ರಾಕಾರದ ಮಧ್ಯದಲ್ಲಿ ಕಟ್ಟಲಾಗಿದೆ. ಕೇವಲ ದೇವಾಲಯದ ವಿಸ್ತೀರ್ಣ 150' ಉದ್ದ 90' ಅಗಲ. ವಿಮಾನದ ಎತ್ತರ 200'. ಇದು ದಕ್ಷಿಣ ಭಾರತದ ದೇವಾಲಯಗಳ ವಿಮಾನಗಳಲ್ಲಿ ಅತ್ಯುನ್ನತವಾದ್ದು. ನುಣುಪಾದ ಗ್ರಾನೈಟ್ ಕಲ್ಲಿನಿಂದ ನಿರ್ಮಿಸಲಾದ ಈ ದೇವಾಲಯದಲ್ಲಿ ಗರ್ಭಗೃಹ, ಪ್ರದಕ್ಷಿಣಪಥ, ಅರ್ಧ ಮಂಟಪ, ಮಹಾ ಮಂಟಪ ಮತ್ತು ಪ್ರತ್ಯೇಕ ನಂದಿ ಮಂಟಪಗಳು ಇವೆ. ಇವೆಲ್ಲವನ್ನೂ ಒಂದೇ ರೇಖೆಯಲ್ಲಿ ಪ್ರಾಕಾರದ ಮಧ್ಯ ಭಾಗದಲ್ಲಿ ಕಟ್ಟಲಾಗಿದೆ.

  ವಿಮಾನದ ಗೋಡೆಯ ಹೊರಭಾಗದಲ್ಲಿ ಎರಡು ಅಂತಸ್ತುಗಳಿವೆ. ಈ ಎರಡೂ ಅಂತಸ್ತುಗಳಲ್ಲಿ ಗೂಡುಗಳಿಂದ ಕೂಡಿದ ವಾಸ್ತುಶಿಲ್ಪ ಅಲಂಕರಣವಿದೆ. ಈ ಗೂಡುಗಳಲ್ಲಿರುವ ಸುಂದರ ಶಿಲ್ಪಗಳು ಚೋಳರ ಕಾಲದ ಮೂರ್ತಿಶಿಲ್ಪದ ಉತ್ತಮ ನಿದರ್ಶನಗಳು. ದಕ್ಷಿಣಾಮೂರ್ತಿ, ಚಂಡೇಶಾನುಗ್ರಹಮೂರ್ತಿ, ಅರ್ಧನಾರೀಶ್ವರ, ಭಿಕ್ಷಾಟನ ಮೂರ್ತಿ, ಚಂದ್ರಶೇಖರ ಇತ್ಯಾದಿ ಅನೇಕ ಶಿವಲೀಲಾ ಮೂರ್ತಿಗಳನ್ನು ಮತ್ತು ಇತರ ಪೌರಾಣಿಕ ಶಿಲ್ಪಗಳನ್ನು ಇಲ್ಲಿ ಬಿಡಿಸಲಾಗಿದೆ. ಇವಲ್ಲದೆ ಅನೇಕ ಪಟ್ಟಿಕೆಗಳಿಂದ ಕೂಡಿದ ಅಧಿಷ್ಠಾನ, ಭಿತ್ತಿಯ ಮೇಲಿನ ಅರೆಗಂಬಗಳು ಹಾಗೂ ಬೋದಿಗೆಗಳು ಇತರ ಚಿತ್ರಪಟ್ಟಿಕೆಗಳು ದೇವಾಲಯದ ಭವ್ಯತೆಗೆ ಪೂರಕವಾಗಿವೆ. ಗರ್ಭಗೃಹದ ಮೇಲ್ಭಾಗದಲ್ಲಿ ಹದಿಮೂರು ಹಂತಗಳಲ್ಲಿ ಮೇಲೇರುವ ದ್ರಾವಿಡ ರೀತಿಯ ವಿಮಾನ, ಅದರ ಮೇಲ್ಭಾಗದಲ್ಲಿರುವ ಬೃಹತ್ತಾದ ಏಕಶಿಲೆಯ ಶಿಖರ ಮುಂತಾದವು ಚೋಳರ ವಾಸ್ತುಶಿಲ್ಪ ಕೌಶಲಕ್ಕೆ, ಪ್ರೌಢಜ್ಞಾನಕ್ಕೆ ಸಾಕ್ಷಿಯಾಗಿವೆ.
    ದೇವಾಲಯದ ದ್ವಾರಗಳು ಪಾಶ್ರ್ವಭಾಗಗಳಲ್ಲಿವೆ, ಉನ್ನತ ಅಧಿಷ್ಠಾನದ ಮೇಲೆ ದೇವಾಲಯವಿರುವುದರಿಂದ ಎರಡೂ ಪಾಶ್ರ್ವಗಳಲ್ಲಿ ಮೆಟ್ಟಲುಗಳನ್ನು ಕಟ್ಟಲಾಗಿದೆ. ಸೋಪಾನಗಳ ಪಕ್ಕಗಳಲ್ಲಿ ಸುಂದರವಾದ ಕೆತ್ತನೆಗಳುಳ್ಳ ಕೈಪಿಡಿ ಗೋಡೆಯನ್ನು ನಿರ್ಮಿಸಲಾಗಿದೆ. ದ್ವಾರದ ಎರಡೂ ಪಕ್ಕಗಳಲ್ಲಿ ಬೃಹದಾಕಾರವಾದ ದ್ವಾರಪಾಲಕ ವಿಗ್ರಹಗಳಿವೆ.

   ಪ್ರದಕ್ಷಿಣಪಥವೂ ಎರಡು ಅಂತಸ್ತುಗಳಿಂದ ಕೂಡಿದ್ದು, ಹೊರಗೋಡೆಯ ಮೂರು ಮುಖಗಳು ಮಧ್ಯಭಾಗದಲ್ಲಿ ಬಾಗಿಲುಗಳುಂಟು. ಪಥದ ಒಳಗೋಡೆಯಲ್ಲೂ ಅಲ್ಲಲ್ಲಿ ಗೂಡುಗಳಿವೆ. ಅವುಗಳಲ್ಲೂ ಶಿವನ ಮತ್ತು ಇತರ ಮುಖ್ಯ ದೇವತೆಗಳ ಮೂರ್ತಿಗಳನ್ನು ಕಡೆಯಲಾಗಿದೆ. ಗೋಡೆಯ ಉಳಿದ ಭಾಗವನ್ನು ಸುಣ್ಣದಿಂದ ನಯಮಾಡಿ ಅದರ ಮೇಲೆ ವರ್ಣ ಚಿತ್ರಗಳನ್ನು ಚಿತ್ರಿಸಲಾಗಿತ್ತು. ಅದರೆ ನಾಯಕರ ಕಾಲದಲ್ಲಿ ಹಳೆಯ ಚಿತ್ರಗಳ ಮೇಲೆ ಮತ್ತೆ ವರ್ಣಚಿತ್ರಗಳನ್ನು ಚಿತ್ರಿಸಲಾಗಿತ್ತು. ಬರೆಯಲಾಗಿದೆಯಾದ್ದರಿಂದ ಎಲ್ಲೋ ಕೆಲವು ಕಡೆಗಳಲ್ಲಿ ಮಾತ್ರ ಚೋಳರ ಮೂಲ ವರ್ಣಚಿತ್ರಗಳನ್ನು ಕಾಣಬಹುದು. ಸ್ವಲ್ಪವೇ ಕಂಡರೂ ಅವು ಆ ಕಾಲದ ಧಾರ್ಮಿಕ, ಸಾಂಸ್ಕøತಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಅಧ್ಯಯನಕ್ಕೆ ಬಹಳ ಸಹಕಾರಿಗಳಾಗಿವೆ.

    ಬೃಹದಾಕಾರವಾದ ಲಿಂಗ ಮತ್ತು ಅಷ್ಟೇ ದೊಡ್ಡದಾದ ಪೀಠವನ್ನು ಹೊಂದಿರುವ ಗರ್ಭಗೃಹದ ಒಳಭಾಗ ಒಂದೇ ಅಂತಸ್ತಿನಿಂದ ಕೂಡಿದ್ದು. ಇದರ ಎತ್ತರ ಹೊರಗಿನ ಎರಡು ಅಂತಸ್ತುಗಳಿಗೆ ಸಮ. ಮಂಟಪ ಮತ್ತು ಮುಖಮಂಟಪಗಳ ಪಾಶ್ರ್ವಭಾಗಗಳಲ್ಲಿ ಮುಚ್ಚಲಾಗಿದೆ. ಒಳಭಾಗದಲ್ಲಿ ಚೋಳರ ಶೈಲಿಯ ಕಂಬಗಳಿವೆ. ಗರ್ಭಗೃಹದ ಮುಂಭಾಗದ ಎರಡು ಮಂಟಪಗಳು ನಾಲ್ಕು ಅಂತಸ್ತುಗಳಿಂದ ಕೂಡಿದವು. ಮಹಾಮಂಟಪದಲ್ಲಿ ಮೂರು ಅಂತಸ್ತುಗಳಿವೆ. ದೇವಾಲಯದ ಮುಂದಿರುವ ನಂದಿ ಮಂಟಪದಲ್ಲಿರುವ ನಂದಿಯ ವಿಗ್ರಹ ಭಾರತೀಯ ಶಿಲ್ಪದ ಕೆಲವೇ ಬೃಹದಾಕಾರದ ನಂದಿಗಳಲ್ಲಿ ಒಂದು.

   ಪೂರ್ವಭಾಗದಲ್ಲಿ ಪ್ರಾಕಾರದ ಮಧ್ಯದಲ್ಲಿ ಕಲ್ಲಿನಿಂದ ಕಟ್ಟಲ್ಪಟ್ಟ ಒಂದು ಗೋಪುರವಿದೆ. ಪ್ರಾಕಾರದ ಒಳಮುಖದಲ್ಲಿ ಸುತ್ತಲೂ ಎರಡು ಅಂತಸ್ತಿನ ಮಾಳಿಗೆಯಿದೆ. ಮಾಳಿಗೆಯ ಮುಂಭಾಗದಲ್ಲಿ ಅಷ್ಟದಿಕ್ಕುಗಳಲ್ಲಿ ಅಷ್ಟದಿಕ್ಪಾಲಕರಿಗಾಗಿ ಸಣ್ಣ ಗುಡಿಗಳಿವೆ. ಈ ಗೋಪುರದಿಂದ ಸ್ವಲ್ಪ ಮುಂದೆ ಮತ್ತೊಂದು ಗೋಪುರದ್ವಾರವಿರುವ ಪ್ರಾಕಾರವುಂಟು. ಹೊರಪ್ರಾಕಾರದ ದ್ವಾರ ಈ ಗೋಪುರದಲ್ಲಿದೆ. ಅನಂತರದ ಕಾಲದ ಕೋಟೆಯ ಒಂದು ಭಾಗವಾಗಿ ಇದು ಉಳಿದಿದೆ.

  ಚೋಳರ ಕಾಲದಲ್ಲಿ ಈ ದೇವಾಲಯಕ್ಕೆ ಅತ್ಯಂತ ಅಮೂಲ್ಯವಾದ ಆಭರಣಗಳು, ಭೂಮಿ, ಹಣ, ಕಂಚಿನ ವಿಗ್ರಹಗಳು ಮುಂತಾದ ಅನೇಕ ಸಾಮಗ್ರಿಗಳನ್ನು ಕಾಣಿಕೆಯಾಗಿ ಕೊಡಲಾಯಿತು. ಇವುಗಳಲ್ಲನೇಕವನ್ನು ವಿವರಣಾತ್ಮಕವಾಗಿ ದೇವಾಲಯದ ಅಧಿಷ್ಠಾನದ ಮೇಲಿರುವ ಶಾಸನಗಳು ರೂಪಿಸುತ್ತವೆ. ಈ ಶಾಸನಗಳು ಚೋಳರ ಲಿಪಿಯ ಉತ್ತಮ ನಿದರ್ಶನಗಳು. ಕಾಣಿಕೆಯಾಗಿ ಬಂದ ಅನೇಕ ಕಂಚಿನ ವಿಗ್ರಹಗಳಲ್ಲಿ ಕೆಲವು ಈಗಲೂ ಇಲ್ಲಿ ಕಾಣಸಿಗುತ್ತವೆ. ಇವು ಚೋಳರ ತಾಮ್ರ ಶಿಲ್ಪ ಅಧ್ಯಯನಕ್ಕೆ ಮೂಲಾಧಾರಗಳು.

   ಬೃಹದೀಶ್ವರ ದೇವಾಲಯದ ಪ್ರಾಕಾರದ ಒಳಗೆ ವಾಯುವ್ಯ ಭಾಗದಲ್ಲಿ ಕಟ್ಟಲಾಗಿರುವ ಮತ್ತೊಂದು ದೇವಾಲಯವೆಂದರೆ ಸುಬ್ರಹ್ಮಣ್ಯೇಶ್ವರ ದೇವಾಲಯ. 18 ನೆಯ ಶತಮಾನದಲ್ಲಿ ನಾಯಕರ ಕಾಲದಲ್ಲಿ ನಿರ್ಮಿತವಾದ ಈ ದೇವಾಲಯ ದ್ರಾವಿಡ ಶೈಲಿಯ ಎಲ್ಲ ಉತ್ತಮ ಗುಣಗಳನ್ನೂ ಒಳಗೊಂಡಿದೆ. ಗರ್ಭಗೃಹ, ಅರ್ಧಮಂಟಪ, ಮುಖಮಂಟಪ ಇತ್ಯಾದಿಗಳಿಂದ ಕೂಡಿದ ಈ ದೇವಾಲಯವನ್ನು ನಯವಾದ ಗ್ರಾನೈಟ್ ಕಲ್ಲಿನಿಂದ ಕಟ್ಟಲಾಗಿದೆ. ತಳಪಾದಿಯ ಪಟ್ಟಿಕೆಗಳು, ಬಿತ್ತಿಯ ಅಲಂಕಾರಿಕ ಗೂಡುಗಳು, ಜಾಲಂಧ್ರಗಳು, ಅರೆಗಂಬಗಳು, ಪಂಜರಗಳು, ಸುಂದರವಾದ ಕಾರ್ನಿಸ್, ಕೈಪಿಡಿಗೋಡೆ ಇವೆಲ್ಲ ದೇವಾಲಯದ ಆಕರ್ಷಣೆಗೆ ಪೂರಕವಾಗಿದೆ. ಗರ್ಭಗೃಹದ ಮೇಲಿರುವ ದ್ರಾವಿಡ ರೀತಿಯ ವಿಮಾನ ರಮಣೀಯವಾದುದು. ಗರ್ಭಗೃಹದ ಒಳಗಿರುವ ವಿಗ್ರಹ ಷಣ್ಮುಖವಾದುದ್ದರಿಂದ ವಿಮಾನದ ಮೇಲಿರುವ ಶಿಖರಕ್ಕೆ ಆರು ಮುಖಗಳಿವೆ.                (ಎಂ.ಎಸ್.ಕೆ.ಎಮ್.)

   ಇತಿಹಾಸ: 985-1014 ರಲ್ಲಿ ಆಳ್ವಿಕೆ ನಡೆಸಿದ 1 ನೆಯ ರಾಜರಾಜನ ಅನಂತರದ ವರೆಗೂ ತಂಜಾವೂರು ಚೋಳ ದೊರೆಗಳ ರಾಜಧಾನಿಯಾಗಿತ್ತು. ಒಂದನೆಯ ರಾಜರಾಜನ ಕಾಲದಲ್ಲಿ ತಂಜಾವೂರು ತನ್ನ ವೈಭವದ ಪರಾಕಾಷ್ಠೆಯನ್ನು ಮುಟ್ಟಿತ್ತು. ರಾಜರಾಜ ಅನಂತರ ಬಂದ ರಾಜೇಂದ್ರ ಚೋಳ ರಾಜಧಾನಿಯನ್ನು ಇಲ್ಲಿಂದ ಬದಲಾಯಿಸಿದ. ಇದರಿಂದ ತಂಜಾವೂರಿನ ಮಹತ್ತ್ವ ತಗ್ಗಿತು. ಸ್ವಲ್ಪ ಕಾಲ ತಂಜಾವೂರು ಹೊಯ್ಸಳರ ಮತ್ತು ಮಧುರೆಯ ಪಾಂಡ್ಯರ ಆಡಳಿತಕ್ಕೊಳಪಟ್ಟಿತು. ಮಲ್ಲಿಕ್ ಕಾಫರನ ಆಕ್ರಮಣದ ಅನಂತರ ಇದು ವಿಜಯನಗರದ ಸಾಮ್ರಾಜ್ಯದ ಭಾಗವಾಯಿತು. ಅದರ ಪ್ರಾಂತಾಧಿಪತಿಯೊಬ್ಬ 16ನೆಯ ಶತಮಾನದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ. ನಾಯಕ ಮನೆತನದ ಆಡಳಿತ ಆರಂಭವಾಯಿತು. ಈ ಮನೆತನದ ಅರಸರ ಕಾಲದಲ್ಲಿ ತಂಜಾವೂರು ಮತ್ತೊಮ್ಮೆ ಪ್ರಾಮುಖ್ಯ ಗಳಿಸಿತು. ಅವರು ಇಲ್ಲಿ ಎರಡು ಕೋಟೆಗಳನ್ನು ನಿರ್ಮಿಸಿದರು. ಅವುಗಳಲ್ಲಿ ಒಂದು ಈಗಲೂ ಉಳಿದಿದೆ. 1674 ರ ಸುಮಾರಿಗೆ ಇದು ಮರಾಠಾ ವಂಶವೊಂದರ ಆಳ್ವಿಕೆಗೆ ಒಳಪಟ್ಟಿತು. 1799 ರಲ್ಲಿ ಇದರ ಸುತ್ತಣ ಪ್ರದೇಶವನ್ನು ರಾಜ ಸರ್ಫೋಜಿ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಗೆ ವಹಿಸಿಕೊಟ್ಟ. ಇವನ ಅನಂತರ ಬಂದ ಶಿವಾಜಿಗೆ ಮಕ್ಕಳಿರಲಿಲ್ಲವಾದ್ದರಿಂದ ಅವನ ಮರಣಾನಂತರ (1855) ತಂಜಾವೂರು ಸಂಪೂರ್ಣವಾಗಿ ಬ್ರಿಟಿಷರ ಆಡಳಿತಕ್ಕೆ ಸೇರಿಹೋಯಿತು.

   ತಂಜಾವೂರು ಜಿಲ್ಲೆ : ವಿಸ್ತೀರ್ಣ 9,735 ಚ.ಕಿಮೀ. ಜನಸಂಖ್ಯೆ 38,40,732 (1971). ಪೂರ್ವದ ಕಡೆಗೆ ಇಳಿಜಾರಾಗಿರುವ ಜಿಲ್ಲೆಯ ಉತ್ತರ ಪೂರ್ವ ಭಾಗಗಳು ಕಾವೇರಿ ನದೀ ಮುಖಜಪ್ರದೇಶ. ದಕ್ಷಿಣ ಭಾಗ ಒಂದು ಬಯಲು. ತಂಜಾವೂರಿನ ನೈಋತ್ಯ ಭಾಗದಲ್ಲಿರುವ ಚಿಕ್ಕ ಪ್ರಸ್ಥಭೂಮಿಯನ್ನು ಬಿಟ್ಟರೆ ಈ ಜಿಲ್ಲೆಯಲ್ಲಿ ದಿಣ್ಣೆಗಳಿಲ್ಲ. ಮುಖ್ಯ ಪ್ರದೇಶಗಳಲ್ಲಿ ಮೆಕ್ಕಲು ಮಣ್ಣು ಉಳಿದೆಡೆ ಕೆಂಪು ಜಂಬು ಮಣ್ಣು ಹಾಗೂ ಮರಳುಮಿಶ್ರಿತ ಜೇಡಿ ಮಣ್ಣೂ ಇವೆ. ಕಾವೇರಿ ಮತ್ತು ಅದರ ಕೆಲವು ಉಪನದಿಗಳೂ ನಾಲೆಗಳೂ ಇರುವ ಈ ಜಿಲ್ಲೆಯಲ್ಲಿ ಅರಣ್ಯಗಳಿಲ್ಲ. ನದೀ ಮುಖಜ ನೆಲದಲ್ಲಿ ತಾಳೆ ತೆಂಗು ಬಿದಿರುಗಳನ್ನೂ ದಕ್ಷಿಣ ಭಾಗದಲ್ಲಿ ಹುಣಸಿ ಹಲಸಿನ ಮರಗಳನ್ನೂ ಕಾಣಬಹುದು. ಬಾಳೆ, ಅತಿ, ಅಂಜೂರ, ಮಾವು ಎಲ್ಲೆಡೆ ಇವೆ. ಕುರುಚಲು ಪೊದೆಗಳಿರುವ ಭಾಗಗಳಲ್ಲಿ ಜಿಂಕೆ, ಕಾಡುಹಂದಿ, ನರಿ, ಇವೆ. ಅನೇಕ ಬಗೆಯ ಪಕ್ಷಿಗಳುಂಟು. ನೀರಾವರಿ ಸೌಲಭ್ಯವಿರುವದರಿಂದಲೂ ಮಣ್ಣು ಫಲವತ್ತಾಗಿರುವದರಿಂದಲೂ ತಂಜಾವೂರು ಕೃಷಿಪ್ರಧಾನ ಜಿಲ್ಲೆ. ಜಿಲ್ಲೆಯ ಸುಮಾರು 5/7 ಭಾಗ ಕೃಷಿ ಯೋಗ್ಯ ಭೂಮಿ, ಮುಖ್ಯ ಬೆಳೆಗಳು, ಬತ್ತ, ರಾಗಿ, ನೆಲಗಡಲೆ, ಹತ್ತಿ, ಕಬ್ಬು, ಎಳ್ಳು, ತಂಬಾಕು, ಹಣ್ಣುಗಳು, ರೇಷ್ಮೇ, ನೇಯ್ಗೆ ಒಂದು ಮುಖ್ಯ ಕಸಬು. ಇಲ್ಲಿಯ ಸಿರೆಗಳು ಪ್ರಸಿದ್ಧವಾಗಿವೆ. ಚಾಪೆ, ಹಿತ್ತಾಳೆ ಪಾತ್ರೆಗಳು, ಸಂಗೀತ ವಾದ್ಯಗಳು ಮುಂತಾದವನ್ನೂ ತಯಾರಿಸುತ್ತಾರೆ.

  12 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುವ ಕುಂಭಕೋಣಂ (1,13,130) , ಅಣ್ಣಾಮಲೈ ವಿಶ್ವವಿದ್ಯಾನಿಲಯ ಹಾಗೂ ನಟರಾಜ ದೇವಾಲಯ ಇರುವ ಚಿಂದಬರಂ, ಮೀನುಗಾರಿಕೆ ತರಬೇತಿ ಕೇಂದ್ರವಿರುವ, ಪ್ರಸಿದ್ಧ ಬಂದರಾದ ನಾಗಪಟ್ಟಿನಮ್, (68,026), ಸಕ್ಕರೆ ಕಾರ್ಖಾನೆಯಿರುವ ವಡಪತಿ ಮಂಗಲಂ-ಇವು ಜಿಲ್ಲೆಯ ಕೆಲವು ಮುಖ್ಯ ಸ್ಥಳಗಳು. ಜಿಲ್ಲೆಯಲ್ಲಿ ಅನೇಕ ದೇವಾಲಯಗಳಿವೆ.

  ಜಿಲ್ಲೆಯ ತಾಲ್ಲೂಕುಗಳು ಇವು : ಸೀಕಾಳಿ (2,12,954), ಮಯೂರಂ (4,15,667), ಕುಂಭಕೋಣಂ (4,30,399), ನನ್ನಿಲಂ (3,03,343), ಪಾಪನಾಶಂ (2,63,050), ತಂಜಾವೂರು (4,38,609), ಒರತ್‍ನಾಡ್ (2,27,850), ಮನ್ನಾರ್ಗುಡಿ (3,19,768), ನಾಗಪಟ್ಟಿನಮ್ (3,22,401), ತಿರುತರೈಪುಂಡಿ (3,20,850), ಪುದುಕೋಟೈ (2,63,121), ಪೆರುವುರಣಿ (ಉಪಜಿಲ್ಲೆ) (1,20,319) ಮತ್ತು ಅರಂಟಮಗಿ (2,02,401).													(ಎಚ್.ಜಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ